ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಜಿಲ್ಲಾ ಆಡಳಿತ ಮುಖ್ಯಪಟ್ಟಣ; ದೆಹಲಿಯಿಂದ 128 ಕಿಮೀ ದೂರದಲ್ಲಿದೆ. ವಿಸ್ತೀರ್ಣ 3650 ಚ.ಕಿಮೀ. ಜನಸಂಖ್ಯೆ 36,20,436 (2001). ಊರಿನ ಹಿಂದಿನ ಹೆಸರು ಕೊಯಿಲ್ ಅಥವಾ ಕೋಲ್. ಮುಸ್ಲಿಂ ಸಂತರ ಅನೇಕ ಗೋರಿಗಳಿವೆ. 1889ರಲ್ಲಿ ಸ್ಥಾಪಿತವಾದ ದೊಡ್ಡ ಲಯಾಲ್ ಗ್ರಂಥಭಂಡಾರವನ್ನು ಈಗ ಮಾಳವೀಯ ಗ್ರಂಥ ಭಂಡಾರ ಎಂದು ಕರೆಯುತ್ತಾರೆ. ಬೀಗಗಳು ಮುಂತಾದ ಲೋಹಪದಾರ್ಥಗಳು, ಜಮಖಾನಗಳು, ರತ್ನಗಂಬಳಿಗಳು ಇಲ್ಲಿ ಹೆಚ್ಚಾಗಿ ತಯಾರಾಗುತ್ತವೆ. ಇದು ಮುಸ್ಲಿಮರ ಪ್ರಸಿದ್ಧ ವಿದ್ಯಾಕೇಂದ್ರ . 1875 ರಲ್ಲಿ ಮುಸ್ಲಿಮರ ಅಭ್ಯುದಯಕ್ಕಾಗಿ ಸರ್ ಸೈಯದ್ ಅಹಮದ್ ಸ್ಥಾಪಿಸಿದ ವಿದ್ಯಾಶಾಲೆ ಪ್ರೌಢವಿದ್ಯಾಶಾಲೆಯಾಗಿ ಬೆಳೆದು ಈಗ ಅಲಿಘರ್ ವಿಶ್ವವಿದ್ಯಾಲಯವಾಗಿದೆ. ಇದಕ್ಕೆ ಸಂಬಂಧಿಸಿದ ಕಾಲೇಜುಗಳು, ವೃತ್ತಿಶಿಕ್ಷಣ ಶಾಲೆಗಳು, ವಿವಿಧ ಕಲಾಶಾಲೆಗಳು ಅನೇಕ ಇವೆ. ಇಲ್ಲಿನ ನೇತ್ರವಿದ್ಯಾಕೇಂದ್ರ ತುಂಬ ಪ್ರಸಿದ್ಧಿ ಪಡೆದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ